Tuesday, 29 March 2016

ನಾ ಕಂಡಂತೆ ರೋಹಿತ್ ವೇಮುಲನ ಆತ್ಮಹತ್ಯೆಯೂ ಮತ್ತು ಅದರ ಹಿಂದಿನ ರಾಜಕಾರಣವೂ.......


ಅದು ಜನವರಿ 17. ಆ ದಿನ ಎಂದಿನಂತೆ ಸಾಮಾನ್ಯ ದಿನವಾಗಿರಲಿಲ್ಲ ಕಾರಣವಿಷ್ಟೆ, ನಾವ್ಯಾರು ಊಹಿಸದಿದ್ದ ಹೈದರಾಬಾದ್ ಕೇಂದ್ರಿಯ ವಿವಿಯ ಪ್ರತಿಭಾವಂತ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆ,...!. ಆತನ ಸಾವಿನ ಸುದ್ದಿ ನನಗೆ ತಿಳಿದಿದ್ದು ಸಂಜೆ ೭ಕ್ಕೆ. ನನ್ನ ರೂಮೇಟ್ ರಾಜಕುಮಾರನ ಮೂಲಕ. ನಾನಿರುವ ಎಚ್ ವಿಭಾಗದ ಹಾಸ್ಟೆಲ್ ನಿಂದ ನೂರು ಮೀಟರ್ ದೂರಳತೆಯಲ್ಲಿದ್ದದ್ದು ವೇಮುಲನ New Research Hostel(NRS). ಪ್ರಾರಂಭದಲ್ಲಿ ನನಗನಿಸಿದ್ದು ಇದು ಬೇರೆ ಯಾವುದೂ ವ್ಯಕ್ತಿ ಇರಬಹುದೆಂದು. ಆದರೆ, ಅದು ರೋಹಿತ್ ವೇಮುಲ ಎಂದು ತಿಳಿಯಲು ಬಹಳ ಸಮಯವೇನು ಹಿಡಿಯಲಿಲ್ಲ. ನಾನು ಬಹಳ ಸಾರಿ ಅವನನ್ನು ಹತ್ತಿರದಿಂದ ನೋಡಿದ್ದೆ. ಅನೇಕ ಸಾರಿ ಅಂಬೇಡ್ಕರ್ ವಿಧ್ಯಾರ್ಥಿ ಸಂಘಟನೆಯ ಕಾರ್ಯಕ್ರಮದಲ್ಲಿ ನೋಡಿದ್ದ ಇಂತಹ ಮುಖಪರಿಚಯದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾಗ ರೋಹಿತ್ ನನ್ನು ಭೇಟಿಯಾದವರು ನಂಬದ ವಿಷಯ. ಹೌದು, ಖಂಡಿತ ಇದು ನನ್ನ ಮಟ್ಟಿಗೆ ನಂಬಲರ್ಹ ವಿಷಯ. ಒಂದು ಕಡೆ ವೇಮುಲ ಅಂಬೇಡ್ಕರ್, ಮಾರ್ಕ್ಸ್ ರ ವಿಚಾರಗಳಿಂದ ಪ್ರಭಾವಿತನಾಗಿ, ಅವುಗಳನ್ನ ಅಷ್ಟೇ ಚಾಚು ತಪ್ಪದೇ ಪಾಲಿಸುತ್ತಿದ್ದ ಧೈರ್ಯದ ವ್ಯಕ್ತಿ. ಆತನ ಶಿಸ್ತು ಅನೇಕ ಕಾರ್ಯಕ್ರಮ ಮತ್ತು ಹೈದರಾಬಾದ್ ವಿವಿಯಲ್ಲಿನ ಹೋರಾಟದ ಮೂಲಕ ಹತ್ತಿರದಿಂದ ಕಂಡಿದ್ದುಂಟು. ಅಷ್ಟೇ ಅಲ್ಲದೆ ನಾನು ಹೈದರಾಬಾದ್ ಕೇಂದ್ರೀಯ ವಿವಿಗೆ ಸೇರಿದ ಎರಡು ವರ್ಷಗಳ ಕಾಲಾವಧಿಯಲ್ಲಿ ನಾ ನೋಡಿದ ಮೊದಲ ಆತ್ಮಹತ್ಯೆ, ಅಲ್ಲದೇ ಇದೊಂದು ರಾಜಕೀಯ ಪ್ರೇರಿತ ಕೋಲೆ. ವೇಮುಲನ ಆತ್ಮಹತ್ಯೆಗೂ ಮೊದಲು ನಾನು ಪ್ರತಿದಿನ ಯಾವುದಾದರೂ ಕಾರ್ಯದ ನಿಮಿತ್ತ ವಿವಿಯಲ್ಲಿನ shoping complex ಗೆ ಹೋದಾಗ ನಾನು ಸಧಾ ನೋಡುತಿದ್ದದ್ದು ಅಂಬೇಡ್ಕರ್, ಜ್ಯೋತಿಭಾಪುಲೆ, ಕಾನ್ಷಿರಾಮ್ ರ ಭಾವಚಿತ್ರಗಳಿಂದ ಹೊದಿಸಿದ ವೆಲ್ಲಿವಾಡ (ಒಂದು ರೀತಿಯ ಟೆಂಟ್). ಆ ಪುಟ್ಟ ಟೆಂಟನಲ್ಲಿದ್ದ ಐದು ಸಂಶೋಧನಾ ವಿದ್ಯಾರ್ಥಿಗಳು ಸಾಮಾಜಿಕವಾಗಿ ಸವರ್ಣಿಯರಿಂದ ಹಳ್ಳಿಯಲ್ಲಿ ದಲಿತರೆನ್ನುವ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಟ್ಟಿದ್ದಾರೆ. ಈಗ ಅಂತಹದೇ ನೆಪದಲ್ಲಿ ಅಸ್ಪೃಶ್ಯತೆಯನ್ನು ಆಧುನಿಕತೆಯ ಮಾದರಿಯಲ್ಲಿ ಆಚರಿಸುವ ನೀಚ ಪಕ್ರಿಯೆಗೆ ವಿಶ್ವವಿಧ್ಯಾನಿಲಯಗಳು ಚಾಲನೆ ನೀಡಿವೆ. ಆ ಮೂಲಕ ಅಂತಹ ವ್ಯವಸ್ಥೆಯನ್ನ ಪ್ರಶ್ನಿಸುವವರನ್ನು ಮುಗಿಸುವಂತಹ ಹುನ್ನಾರ ಸ್ಪಷ್ಟವಾಗಿದೆ.
ಈ ಎಲ್ಲ ನಡೆಗಳು ನಮಗೆ ಪುರಾತನ ಋಗ್ವೇದದ ಪುರುಷಸೂಕ್ತನ ದೇಹರೂಡಿಯಂತೆ ಶೂದ್ರ ಮತ್ತು ಪಂಚಮನ ಕೆಲಸ ಇನ್ನುಳಿದ ವರ್ಗಗಳನ್ನು ಸಂತೈಸುವಂತದು. ಜ್ಞಾನವೆನ್ನುವುದು ಬ್ರಾಹ್ಮಣನಿಗೆ ಮಾತ್ರ ಸಿಮೀತವಾದಂತದು ಎನ್ನುವ ತತ್ವಗಳನ್ನು ನೆನಪಿಸುವಂತಿದೆ. ಇಂತಹ ಪರಂಪರಾಗತ ಕಟು ಸಾಂಪ್ರದಾಯಿಕ ಆಚರಣೆಗಳು ಆಧುನಿಕತೆಯ ನಡುವೆಯೂ ಜೀವಂತವಾಗಿರುವದಕ್ಕೆ, ವೇಮುಲನ ಸಾವಿಗೆ ಉದಾಹರಣೆ ರಾಮಾಯಣದ ಸಂಬೂಕ ಹಾಗೂ ಮಹಾಭಾರತದಲ್ಲಿನ ಏಕಲವ್ಯರಷ್ಟೇ ಸತ್ಯ. ವೇಮುಲ ಆತ್ಮಹತ್ಯೆ ಪ್ರಾರಂಭದಲ್ಲಿ ಹತ್ತರಲ್ಲಿ ಹನ್ನೊಂದನೆಯ ಘಟನೆಯಾಗಿ ಹೋಗಬಹುದೆಂದು ನಾನು ಭಾವಿಸಿದ್ದೆ, ಏಕೆಂದರೆ, ಈ ಹಿಂದೆಯೂ ಕೂಡಾ ದಲಿತ ಮತ್ತು ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೇಳ ಹೆಸರಿಲ್ಲದಂತೆ ಮುಚ್ಚಿಹೋಗಿದ್ದವು. ಅದಕ್ಕೆ ಪೂರಕವಾಗಿ ಅವರ ವಯಕ್ತಿಕ ಮಾನಸಿಕ ಕಾರಣಗಳಿಂದಾಗಿ ಈ ಎಲ್ಲಾ ಸಾವುಗಳು ಸಂಭವಿಸಿದವು ಎನ್ನುವ ಮಾತುಗಳಿಗೆನೂ ಕಮ್ಮಿ ಇರಲಿಲ್ಲ. ಇಂತಹ ಕುತರ್ಕವಾದಗಳು ರೈತರ ಆತ್ಮಹತ್ಯೆಯಲ್ಲಿನ ಸ೦ದರ್ಭದಲ್ಲಿಯೂ ಇದ್ದಿರುವಂತದ್ದು ನಮ್ಮ ನೆನಪಿನಿಂದ ಮಾಸಿಲ್ಲ. ಇಲ್ಲಿ ಆತ್ಮಹತ್ಯೆಯನ್ನು ಕೇವಲ ವಯಕ್ತಿಕ ಕಾರಣದ ಮೂಲಕ ನೋಡುವುದರೋಟ್ಟಿಗೆ, ಅದರ ಹಿನ್ನಲೆಯಲ್ಲಿರುವ ನವ ಉಧಾರವಾದಿ ಜಾಗತೀಕರಣದ ಹಾಗೂ ಬ್ರಾಹ್ಮಣ ಶಾಹಿ ವ್ಯವಸ್ಥೆಯ ನೀತಿಗಳನ್ನು ಸಂರಕ್ಷಿಸುವ ಎತೇಚ್ಚ ಪ್ರಯತ್ನ ಒಂದು ಕಡೆ ನಡೆಯುತ್ತಿದೆ.
ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ರವರು ಹೇಳುವಂತೆ ರೈತರ ಆತ್ಮಹತ್ಯೆಯೂ ಸರ್ಕಾರದ ಆರ್ಥಿಕ ಮತ್ತು ರಾಜಕೀಯ ನೀತಿಗಳ ಪ್ರತಿಫಲವಾಗಿ ಜರುಗುವಂತೆ ಇಂದಿನ ರೋಹಿತ್ ವೇಮುಲಾನ ಆತ್ಮಹತ್ಯೆಯೂ ಕೂಡಾ ಅಂತಹ ನೀತಿಗಳ ಮೂಲಕ ನಾವು ನೋಡಬಹುದಾದ ಶೈಕ್ಷಣಿಕ ವ್ಯವಸ್ಥೆಯ ಒಂದು ಪ್ರಾತಿನಿಧಿಕ ಘಟನೆ. ಅಷ್ಟಕ್ಕೂ ಮೀರಿ ಒಬ್ಬ ಕಮ್ಮಾನೋ, ರೆಡ್ಡಿಯೋ ಅಥವಾ ಒಬ್ಬ ಬ್ರಾಹ್ಮಣನೋ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಹೈದರಾಬಾದ್ ವಿವಿಯಲ್ಲಿ ಕಾಣಸಿಗುವುದಿಲ್ಲ. ಈ ಎಲ್ಲ ಹಿನ್ನಲೆಯನ್ನು ಗಮನಿಸಿದಾಗ ಕೆಲವು ಅಂಶಗಳನ್ನು ನಾವು ಇತಿಹಾಸದ ಪಾಠದಿಂದ ತಿಳಿಯಬೇಕಾದುದು ಅಗತ್ಯ. ಸ್ವಾತಂತ್ರೋತ್ತರ ಭಾರತದಲ್ಲಿ ಮೀಸಲಾತಿಯ ಕಾರಣದಿಂದಾಗಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳು ಅಲ್ಪ ಮಟ್ಟಿಗೆ ಸ್ವಾವಲಂಬನೆಯನ್ನು ಮತ್ತು ಅಭಿವೃದ್ದಿಯನ್ನು ಶೈಕಣಿಕವಾಗಿ ಹಾಗೂ ಆರ್ಥಿಕವಾಗಿ ಸಾಧಿಸಲ್ಪಟ್ಟಿವೆ. ಈ ಎಲ್ಲ ಬದಲಾವಣೆಗಳನ್ನು ನಾವು ದೇಶದ ಪ್ರತಿಷ್ಟಿತ ವಿವಿಗಳ ಕ್ಯಾಂಪಸ್ ರಾಜಕಾರಣದ ಮೂಲಕ ಕಾಣಬಹುದು. ಇಂತಹ ವಿದ್ಯಾರ್ಥಿಗಳ ಕ್ಯಾಂಪಸ್ ರಾಜಕಾರಣವು, ಅದರಲ್ಲೂ ಇಂದು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೋರಾಟ ಮೂಲಭೂತವಾಗಿ ಜಾಗತೀಕರಣದ ಮೂಲಕ ಬೆಳೆದು ಬಂದ ಉಧಾರವಾದಿ ನೀತಿಗಳು ಹಾಗೂ ಬ್ರಾಹ್ಮಣಶಾಯಿ ಶಕ್ತಿಗಳನ್ನು ಪ್ರಶ್ನಿಸುವ ಮತ್ತು ಅವುಗಳನ್ನು ಮಟ್ಟಹಾಕುವವರೆಗಿನ ಇಚ್ಚಾಶಕ್ತಿಯ ಪ್ರದರ್ಶನ ಬಲಪಂಥಿಯ ಶಕ್ತಿಗಳಿಗೆ ಒಂದು ಸವಾಲಾಗಿ ಪರಿಗಣಿಸಿದೆ. ಕಾರವಿಷ್ಟೇ ಇಂದಿನ ರೋಹಿತ್ ವೇಮುಲನ ಹತ್ಯೆಯ ಸಂದರ್ಭದಲ್ಲಿನ ನೀಲ್ ಸಲಾಂ ಮತ್ತು ಲಾಲ್ ಸಲಾಮ್ ನ ಒಗ್ಗಟ್ಟಿನ ಹೋರಾಟವು ವಿದ್ಯಾರ್ಥಿ ಚಳವಳಿಯಲ್ಲಿ ಒಂದು ರೀತಿಯ ಹೊಸ ಸಂಚಲನ ಹುಟ್ಟಿಸಿದೆ. ಇದಕ್ಕೆ ಪೂರಕವಾಗಿ ಹೈದರಾಬಾದ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಗಳು ವಿವಿಧ ಸಿಧ್ಧಾಂತಗಳ ಕೇಂದ್ರಬಿಂದು (Epic Center) ಗಳಾಗಿ ಕಾಣುತ್ತವೆ. ಇಲ್ಲಿ ಗಾಂಧಿ, ಅಂಬೇಡ್ಕರ್, ಮಾರ್ಕ್ಸವಾದಗಳಿಂದ ಹಿಡಿದು ಗೋಲ್ವಾಲ್ಕರ್, ಸಾವರ್ಕರರ ಹಿಂದುತ್ವವಾದಗಳವರೆಗೂ ಚರ್ಚೆಗೊಳಪಡುತ್ತವೆ. ಇಂತಹ Politicaly alert ಹಾಗೂ vibrant ಆಗಿರುವಂತಹ ಹಾಗೂ ಪ್ರಗತಿಪರ ಮತ್ತು ಸಾಮಾಜಿಕ ರಾಜಕೀಯ ವಿಷಯಗಳಿಗೆ ತಕ್ಷಣ ಸ್ಪಂಧಿಸುವ ವಿವಿಗಳಲ್ಲಿ ಮುಂಚೂನೆಯಲ್ಲಿರುವಂತವು. ಇಂತಹ ಸಂಸ್ಥೆಗಳಿಗೆ ಸಂಘ ಪರಿವಾರಕ್ಕೆ ಸಿಂಪಥಿ ಇರುವ ವ್ಯಕ್ತಿಗಳನ್ನು ಕುಲಪತಿಗಳನ್ನಾಗಿ ನೇಮಿಸುವ ಮೂಲಕ ಒಂದು ರೀತಿಯಲ್ಲಿ ವಿವಿಗಳನ್ನು ಕೇಸರಿಕರಣಕ್ಕೆ ಒಳಪಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿದಂತಿದೆ. ಇನ್ನೊಂಡದೆ ಇತ್ತೀಚಿಗೆ ಬಿಜೆಪಿ ಮತ್ತು ಆರ್ ಎಸ್ ಎಸ್ ಹಿಂದುತ್ವದ ಬದಲಾಗಿ ರಾಷ್ಟ್ರಿಯತವಾದದ (Nationalism) ಪದನಾಮ ಬಳಕೆಯು ಒಂದು ರೀತಿಯಲ್ಲಿ ಹಿಂದುತ್ವ ರಾಜಕಾರಣವನ್ನು ಇಮ್ಮಡಿಗೊಳಿಸುವುದಕ್ಕೆ ಸಿದ್ದವಾದಂತೆ ಕಾಣುತ್ತದೆ. ಆ ಮೂಲಕ ಬಿಜೆಪಿ ಇಂದು ತನ್ನ ಸರ್ಕಾರದ ನಡೆಗಳಿಗೆ ಎಲ್ಲ ಜವಾಬುಗಳನ್ನು ಕೊಡುವುದರ ಮೂಲಕ ಮತ್ತು ಅಂತಹ ವಿಚಾರಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿ (Anti-national) ಪಟ್ಟವನ್ನು ಕಟ್ಟುತ್ತಿದೆ..
ಅದ್ದರಿಂದ ಇಂದು ೭೫ ರ ತುರ್ತುಪರಿಸ್ಥಿತಿಯ ನಂತರ ನಡೆಯುತ್ತಿರುವ ಬಹುದೊಡ್ಡ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಚಳವಳಿಯನ್ನು ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ವಿಧ್ಯಾರ್ಥಿಗಳಿಗೆ ನೀರು, ಆಹಾರ, ಇಂಟರ್ನೆಟ್ ಇನ್ನಿತರ ಸೌಲಭ್ಯಗಳನ್ನು ಕಡಿತಗೊಳಿಸುವುದರ ಜೊತೆಗೆ ಮಾದ್ಯಮದವರಿಗೂ ಕೂಡ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಅಷ್ಟೇ ಅಲ್ಲ, ಹೇರಳವಾದ ಪೋಲಿಸ್ ಮತ್ತು ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಿ ಹೈದರಾಬಾದ್ ಕೇಂದ್ರಿಯ ವಿಶ್ವವಿಧ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಅಘೋಷಿತ ಎಮರ್ಜೆನ್ಸಿಯ ವಾತಾವರಣ ನಿರ್ಮಿ‍ಸಲಾಗಿದೆ. ಇದರಿಂದ ವಿಧ್ಯಾರ್ಥಿಗಳು ನಿರಾಶ್ರಿತರಂತೆ ಜೀವನ ನಡೆಸುವಂತಾಗಿದೆ. ಅಲ್ಲದೆ ಹೋರಾಟದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ಮತ್ತು ಪ್ರಾಧ್ಯಾಪಕರನ್ನು ಬಂಧಿಸಿದ್ದಲ್ಲದೇ, ಅವರನ್ನು ಹಿಗ್ಗಾಮುಗ್ಗವಾಗಿ ತಳಿಸಲಾಗಿದೆ. ಇಂತಹ ಖಾಕಿ ಬೂಟುಗಳ ಸಪ್ಪಳದಲ್ಲಿ ನನ್ನ ಕಣ್ಣಿಗೆ ಕಂಡದ್ದು ಕ್ಯಾಂಪಸ್ಸಿನ ಮೂಲೆಯಲ್ಲಿದ್ದ ಈ ಗೋಡೆ ಬರಹ…....
You can pluck the
Flowers, But can`t
Stop the spring to Come

ಮಂಜುನಾಥ ನರಗುಂದ
MA ರಾಜ್ಯಶಾಸ್ತ್ರ ದ್ವೀತಿಯ ವರ್ಷ 
ಹೈದರಾಬಾದ್ ಕೇಂದ್ರೀಯ ವಿಶ್ವವಿಧ್ಯಾನಿಲಯ

Thursday, 10 March 2016

ಸುಮ್ಮನೆ ಗೀಚಿದ ಸಾಲುಗಳು
1)

ಸಂಜೆಗತ್ತಲು ಕಳೆದಿದೆ
ಮಸುಕು ಮಂಜು ಹಾಗೆ ಇದೆ 
ಸುಮ್ಮನೆ ಕದಡುತಿದ್ದ
ನವಿರುಗನಸುಗಳನ್ನು
ಬಿತ್ತರಿಸುತ್ತಲಿದ್ದಾಗ
ನಿನ್ನ ಮುಖ ಇನ್ನು ಹಾಗೆ ಇದೆ
ಮೊನ್ನೆ ಕಂಡ ಮುಂಗಾರಿನ ಇಬ್ಬನಿಯಂತೆ.
2)
ಕಾಲಗಳು ಉರುಳುತ್ತಲೇ ಇವೆ
ಕನಸುಗಳು ಹೊಸೆಯುತ್ತಲೇ ಇವೆ
ಎಲ್ಲೋ ನೋಡಿದ ನೆನಪುಗಳು ಹಾಗೆ ಇವೆ
3)
ಕನಸುಗಳಿಗೆ ಕನ್ನಡಿ ಇಟ್ಟು
ಮುಖ ನೋಡಿದೆ
ಎಲ್ಲೋ ಇದ್ದ ಮನಸ್ಸು
ಕತ್ತಲಿಗೆ ಮರುಗಿತ್ತು.
4)
ನಿನ್ನ ನೋಡುತ ಕನಸುಗಳಿಗೆ
ಮುಂಗಾರು ನೆನಪಿಸಿದೆ
ಆ ಸಂಜೆಯ ಇಳಿಗನಸು
ಒಮ್ಮೆಗೆ ನನ್ನತ್ತ ತಿರುಗಿತು
11-02-2016 ಮಂಜುನಾಥ ನರಗುಂದ

ನಕ್ಷತ್ರದ ಹಂಬಲಿಕೆಗಳು
ಕತ್ತಲುಗಳು ಕುಣಿಯುತ್ತಿವೆ
ನೆತ್ತರವು ಹರಿಯುತ್ತಿದೆ
ಕಾಣದಗಲಕ್ಕೂ ಕೈಚಾಚುತ್ತಿದೆ
ನಕ್ಷತ್ರದ ಹಂಬಲಿಕೆಗಳು
ನೇಣುಗಂಬಗಳಾಗುತ್ತಿವೆ
ಬಣ್ಣದ ಕನಸಿಗೆ, ಆದರ್ಶಕ್ಕೆ
ಧರ್ಮದ ವಿಷಜಂತು ಮುಕ್ಕಿದೆ
ಏಕಲವ್ಯ, ಶಂಬೂಕ,ರೋಹಿತರ
ಪ್ರಜ್ಞೆಗಳು
ವೇದೊತ್ತರದ
ಪ್ರಶ್ನೆಗಳು
ಸುಡುಬಿಸಿಲಿಗೆ ಬೇಯ್ದ ಉರಿಚರ್ಮದ
ಉತ್ತರಗಳು
ಧರ್ಮಕ್ಕೆ,ವೇದಕ್ಕೆ,ಶಾಸ್ತ್ರಗಳ ಬಹಿಷ್ಕಾರಕ್ಕೆ
ಉದರಾಗ್ನಿಯ ಕಿಚ್ಚು ಹತ್ತಿದೆ
ಸಂಕಟಗಳು ಜ್ವಾಲೆಯ ಹೊಯ್ದಾಟದಲಿ
ಉರಿಯುತ್ತಿವೆ
ಕಾಯ್ದ ತಮಟೆಗಳ ಆರ್ಭಟಕ್ಕೆ
ಗುಡಿ ಘಂಟೆಯ ಸಪ್ಪಳ ಮಂಕಾಗಿವೆ
ಹೊಸನಾದ ಹೊಸನುಡಿ
ಹೊಸ ಕನಸ ಕಟ್ಟುವ ಆಶಯಗಳು
ನಕ್ಷತ್ರಗಳಾಗುತ್ತಿವೆ
ಜೋತಿಷ್ಯ ಭವಿಷ್ಯದ ನುಡಿಗಳಾಚೆಗೆ...
ಬನದ ಹಕ್ಕಿ 

ಬನದ ಹಕ್ಕಿ ಮುಗಿಲೆತ್ತರಕ್ಕೆ ಹಾರುತ್ತಲೇ ಇತ್ತು,
ಗಡಿಯ ಬಂಧಗಳಾಚೆಗಿನ ಬಣ್ಣಗಳ ಕಾಣುತ್ತಲೇ
ವಸಂತಗಳಾಚೆಯ ದಿನಗಳ
ಎಲ್ಲೆಯನ್ನು ಮಿರುತಿತ್ತು.
ಇಂದು ಬಂಧಗಳ ನಡುವಿದ್ದ
ನನ್ನ ಸಾಮಾನ್ಯತೆಗೆ
ವಿಚಿತ್ರ ಬಣ್ಣಗಳು ಮುತ್ತಿವೆ
ಕರ್ಮದ ಧರ್ಮಕ್ಕೆ
ಅಸಮಾನತೆಯ ಬೆಂಕಿ ಬಿದ್ದಿದೆ
ನನ್ನೊಳಗಿನ ಬನದ ಹಕ್ಕಿ
ಎಲ್ಲೆಗಳನ್ನು ಬಣ್ಣಗಳಲ್ಲಿ ಕಟ್ಟಿದೆ
ಧಾರಾಳತೆಯ ಪರಮಾವಧಿಯ
ಧಾಟಿಯಲಿ ಬಂದ ಹಕ್ಕಿ
ಗೂಡು ಸೇರುವಲ್ಲಿ ದಿಕ್ಕು ತಪ್ಪಿದೆ
ಈ ವಿಚಿತ್ರ ಬಣ್ಣಗಳ ನಡುವಿದ್ದ ಗೂಡನ್ನು
ಕದ್ದವರಾರು?
ಬಣ್ಣಗಳೋ ? ಅಥವಾ ಬಣ್ಣದಲ್ಲಿ ಮಾಯವಾದ ಧಾರಾಳತೆಯೋ?
ಆ ಬನದ ಹಕ್ಕಿ
ಇನ್ನೂ ಅರಸುತ್ತಲೇ ಇದೆ
ಕಳೆದುಕೊಂಡ ಧಾರಾಳತೆಯ ಗೂಡನ್ನು
ಮರಳಿ ಪಡೆದೆನೆಂಬ ಅಚಲ ನಂಬಿಕೆಯೊಂದಿಗೆ.

March 8th 2016