Tuesday 3 November 2015

ಕನಸು ಕಾರಣ.....

ಒಂದು ಕನಸು ಕಾರಣವಿಲ್ಲದೆ
ಬೀಳಬಹುದು
ಕಡು ಹಗಲಿನಲ್ಲೂ
ಕಡು ರಾತ್ರಿಯಲ್ಲೂ
ಅಗೋಚರ ಅಸಂಗತ
ಅನವರತ, ಅನಂತ
ದೂರಕೆ ಕೈಚಾಚಿ
ಹಿಂಬಾಲಿಸಿ ಮುಂಬಾಲಿಸಿ
ಓಡುತ್ತಲೇ ಇರುವ
ಗಳಿಗೆಯ ಮರೆತು
ಆ ಚಣದಿಂದ
ತಡವರಿಸಿ,ಅವಕ್ಕಾಗಿಸಿ
ಎಲ್ಲೋ ಅಲೆದಾಡಿ
ಇತ್ತಲು ಬಂದ ಆ ಕನಸು
ಅಕ್ಷಿಪಟಲದ ಹಂಗಿಲ್ಲದೆ ರಾರಾಜಿಸಿ
ಏಕತಾನ್ಮಯ ,ತಿರುಕ
ಜಾತಿಯ ಈ ಮುರುಕು
ಕನಸು
ಒಮ್ಮೆಹಿಡಿದ ದಾಟಿಯ
ಆವೇಗಕೆ ಬೆನ್ನತ್ತಿ
ನಿಲ್ಲದೆ ಕುಣಿದು ಕುಪ್ಪಳಿಸುತ್ತದೆ
ಅಮಲಿನ ಆವೇಶ
ಮೈ ತಾಗಿ
ಮನಸ್ತಟಲಕ್ಕೆ ಮುಪ್ಪೋ
ಅದು ಯವ್ವನವೋ
ದ್ವಂದ್ವಗೋಚರದ ಸಾಕ್ಷಿಕರಿಸಿ,
ಹೂಂಕರಿಸಿ ಜೇಂಕರಿಸಿ
ಹಗಲುಗತ್ತಲಗಳ
ನಡುವೆ ಕುಂತು
ಒಬ್ಬಂಟಿ ಹುಚ್ಚುತನಕ್ಕೆ
ಸಹ ವೀಕ್ಷಕನಾದದ್ದು
ಈ ಕಣ್ಣುಗಳು ಮಾತ್ರ
03-11-2015 ಮಂಜುನಾಥ ನರಗುಂದ

Wednesday 21 October 2015

ಕಪ್ಪು ಸುಂದರಿ.......


ಕತ್ತಲಿಗೂ ಬೆಳಕು 
ಬೆಳಕಿಗೂ ಕತ್ತಲು 
ಈ ಬಂಧ ಬ್ರಮಿಸಿ 
ಬದುಕ ಹೊರಡಿಸಿ 
ಕೆತ್ತಿದ ಜಕಣ
ಮರುಳಾದ ಮನ ಗ್ರಹಿಸಿ
ಕಪ್ಪು ಸುಂದರಿಯ ಮೋಹಿಸಿ 
ಅಲಂಕಾರ ತೊಡಿಸಿ
ರಂಬೆಯೋ ತಿಲೋತ್ತಮೆಯೋ 
ಮಯೂರ ನಾಟ್ಯದ 
ಅಣುಕು ರಾಣಿ
ಈ ಮಯೂರಿ

ಶಾಂತ ಶೃಂಗಾರ 
ವೀರಾದಿ  ಅದ್ಬುತಗಳ 
ನವರಸದ ಗಣಿ 
ಈ ಸಪ್ನ ಮಂಜರಿ
ಜಕಣನ
ಕಪ್ಪು ಸುಂದರಿ,,,,, 


21-10-2015                                                                         ಮಂಜುನಾಥ ನರಗುಂದ 
ಬುಧವಾರ

Monday 19 October 2015

ಯಾರು......?

ಕಲ್ಲುಗಳ ಕಟೆದು ನಿಲ್ಲಿಸಿ
ವೀರದೀಕ್ಷೆ ಕೊಟ್ಟು
ವೀರಗಲ್ಲು ನಡಿಸಿದವರಾರು....?

ಹಿಂದಣದಿಂದ ಮುಂದಣದವರೆಗೆ
ಗೂಟುಗಲ್ಲು ನಿಲ್ಲಿಸುತ್ತಾ ಅಮರ
ಎನ್ನುವ ಪಿಸಾಚಿಗಳಾರು....?

ಕರ್ಮವೇ ನಮ್ಮ ಕರ್ಮಣ್ಯ
ಎಂದು ಧರ್ಮಗ್ರಂಥ
ಬರೆದವ ಅರಚುತ್ತಾ
ಕಾಲವನ್ನು ಕಾಲಡಿಯಲಿಟ್ಟ
ಆ ಪರಮಾತ್ಮನಾರು...?

ಈ ಗೋರಿಗಳು ಇಲ್ಲೊಂದು
ಅಲ್ಲೊಂದು ಎನ್ನುತ್ತಲೆ
ಹುಟ್ಟು ಇತಿಹಾಸ ತಮ್ಮದೆನ್ನುವ
ಆ ಪುಣ್ಯ ಪುರುಷನಾರು....?
ಗಾದೆಯಿಂದ ವೇದದವರೆಗಿನ
ಸೂಳ್ನುಡಿಗಳ ಸುತ್ತಿ
ಹಳ್ಳಿ ಪುರದವರ ಇತಿಹಾಸ ಬರೆಯದ
ಆ ಮೇಧಾವಿ ಗ್ರಂಥಕರ್ಥನಾರು.....?

ಮೈಕಾಸುರನಿಂದ ಅಬ್ಬರಿಸಿ
ದೇಶಕಟ್ಟಿದವರೆಂದು ಶಂಕುಸ್ಥಾಪನೆ
ಮಾಡಿದ  ಆ ಜನನಾಯಕರು
ಮಂಕುಬೂದಿ ಎರೆಚಿದ್ದು
ಮಹಡಿ ಮಹಲು ಕಟ್ಟಿದ
ಕಾರ್ಮಿಕರಿಗೆ,
ಉತ್ತಿ ಬೆಳೆದ ರೈತರಿಗೆ,
ಬೀದಿಯಲಿದ್ದ  ಕಮ್ಮಾರ, ಚಮ್ಮಾರ,
ಕುಂಬಾರ, ಮಡಿವಾಳನಿಗೆ.
ದೇಶ ಕಟ್ಟಿದ್ದು ಇಂತಹ
ಸಾಮನ್ಯರಲ್ಲದೆ ಮತ್ತಿನ್ಯಾರು.....?



ಮಂಜುನಾಥ ನರಗುಂದ
ಹೈದರಾಬಾದ ಕೇಂದ್ರೀಯ ವಿಶ್ವವಿದ್ಯಾನಿಲಯ
ಹೈದರಾಬಾದ-500046



ಒಂದು ಕ್ಷಣ ಹೀಗಾದಾಗ......!

ಒಂದು ಕ್ಷಣ ಹೀಗಾದಾಗ
ಇತಿಹಾಸ ಕೆಣಕುತ್ತಲೇ ಇತ್ತು
ಜೀವಂತ ಸಾಕ್ಷಿಪ್ರಜ್ಞೆಯೊಂದಿಗೆ ಬದುಕುತ್ತಾ
ನಿನ್ನೆ ಮೊನ್ನೆಗಳ ಆ ಘಟನಾ ಗುಚ್ಚಗಳ
ಸರಣಿಯೊಂದಿಗೆ
ಒಂದು ಕ್ಷಣ ಹೇಳುತ್ತಲೇ ಇತ್ತು
ಬುದ್ದ,ಸ್ರಮಾನ,ಅಜೀವಿಕ,ಚಾರ್ವಕದ
ಸಂಘರ್ಷ ಧಮ್ಮದಿಂದ ಕೂಡಿ
ಧರ್ಮದೊಂದಿಗಿಳಿದಾಗ
ಧರ್ಮಸಂಕಟ ಎಲ್ಲೆ ಮೀರಿ
ನುಸುಳಿತ್ತು ಧಮ್ಮದೊಳಗೆ,
ಆಗ ಸಮಾನತೆಯ ಮುಖವಾಡವಾಗಿ
ಬಿದ್ದಿದ್ದು ಈ ಧರ್ಮ.
ಒಂದು ಕ್ಷಣ ಹೇಳುತ್ತಲೇ ಇತ್ತು
ಬಸವಣ ಕಾಯಕತತ್ವ
ಅನುಭವಮಂಟಪವೆಂಬ ಪಾರ್ಲಿಮೆಂಟಿನಿಂದಿಡಿದು
ಬಿದಿಯವರೆಗಿಳಿದಾಗ ಕಲ್ಯಾಣದ ರಾತ್ರಿಗಳೆಲ್ಲ
ಮರಣಹೋಮವಾಗಿದ್ದವು.
ಒಂದು ಕ್ಷಣ ಹೇಳುತ್ತಲೇ ಇತ್ತು
ಮಹಾತ್ಮನೆಂಬ ಅರ್ಧನಗ್ನ ಸಂತ ಹಿಡಿದ
ಪ್ರಾರ್ಥನೆ,ಶಾಂತಿ-ಅಹಿಂಸೆಯೆಂಬೆರಡು
ಸೂತ್ರಗಳಿಂದಾದ ಸ್ವಂತಂತ್ರಕ್ಕಾಗಿ.
ಧರ್ಮದ ಅಜ್ಞಾನ ಕೋಮುದಲ್ಳೂರಿಗೆ ದೂಕುತ್ತಲೆ
ಹತ್ತ್ಯೆಗೈದದ್ದು ಈ ಫಕೀರನನ್ನು.
ಒಂದು ಕ್ಷಣ ಮತ್ತೆ ಸಂಭವಿಸಿತು
ನಾನಿದ್ದ ಕಾಲದಲಿ
ಕಲಬುರ್ಗಿಯೆಂಬ ಶರಣ
ಮಹಾಮಾರ್ಗ ಹೆಕ್ಕುತ್ತಲೇ ಇದ್ದ
ಷಟಸ್ತಲಗಳ ಮದ್ಯನಿಂತು
ಮೂಲಭೂತವಾದವೆಂಬ ಅಂಧ-ಶ್ರದ್ದೆಗಳ
ಎದುರು ನಿಂತು
ಕಲ್ಯಾಣದ ಬಾಗಿಲು ತೆರೆಯುತ್ತಲೆ ಕಾಲವಾದದ್ದು
ಆ ಕ್ಷಣ ಮಾತ್ರ, ವಿಚಾರಗಳಲ್ಲ.

08/09/2015 
ಮಂಜುನಾಥ ನರಗುಂದ



ಅದೃಶ್ಯ.....
ನನ್ನ ಕಣ್ಣುಗಳು ಅದೃಶ್ಯವಾಗಿವೆ
ಕಾಲಗಳು ಉರುಳಿದ ರೀತಿಯನ್ನು
ಕಲ್ಪನೆಗಳಲಿ ಕಾಣುವಾಗ
ಶತಮಾನಗಳ ಹಿಡಿಕೆಯಲಿ
ಬಂದಿಸಿಟ್ಟ ನಮ್ಮ ಅಜ್ಜ ಅಮ್ಮಂದಿರ
ಕಥನಗಳೊಂದಿಗೆ.


ಮಂಜುನಾಥ ನರಗುಂದ
ಮುಕ್ತ ಬಾರು 

ರಸ್ತೆಗಳೋಡುತ್ತಿವೆ
ಜಗಮಗ ದೀಪಗಳ ಸಾಲಿನೊಂದಿಗೆ
ಆ ಕಡೆ ಈ ಕಡೆಯ ಇಕ್ಕೆಲದ
ಬೀದಿಗಳಿಂದ ,ನಿಲ್ಲದ ರಾತ್ರಿಗಳು
ಬೆಳಕನು ಪಠಿಸುತ್ತಿವೆ.

ಇತ್ತ ಮುಕ್ತ ಬಾರು
ಅಮಲಿನ ಕಾರು ಬಾರಿಗೆ
ತೀರ್ಪುಗಾರನಾಗಿ
ನೆಳಲು ಬೆಳಕಿನ ಕವಲುಗಳಿಗೆ
ಮಂದ ಬೆಳಕನಿಟ್ಟಿದೆ.

ದಿನವಿಡಿ ಜರಗುವ
ಈ ಧ್ಯಾನ ನಿಲ್ಲದೆ,ಭಾರಣಿಯ
ತಳುಕಿಗೆ ದುಂಬಾಲು ಬಿದ್ದು
ಕುಣಿದು ನಿಲ್ಲಿಸಿದ್ದು ಮಾತ್ರ,
ಶ್ರೀ ಲಕ್ಷ್ಮಿ ಕೈ ಬಿಟ್ಟಾಗ......!


 19-10-2015
ಸೋಮವಾರ                       ಮಂಜುನಾಥ ನರಗುಂದ