ನಂದುರಬಾರ್ ಮಹಾರಾಷ್ಟ್ರದ ವಾಯುವ್ಯ ಭಾಗದ ಖಾಂದೇಶ್ ಪ್ರದೇಶದಲ್ಲಿರುವ ಪ್ರಮುಖ ಜಿಲ್ಲೆ. ಒಂದು ಕಡೆ ನರ್ಮದಾ ಇನ್ನೊಂದೆಡೆ ತಪತಿ ನದಿ ಸೆರಗಿನಲ್ಲಿರುವ ಈ ಪ್ರದೇಶ
ಮುಖ್ಯವಾಗಿ ಸರ್ದಾರ್ ಸರೋವರ ಯೋಜನೆಯ ವ್ಯಾಪ್ತಿಗೂ
ಒಳಪಟ್ಟಿದೆ. ಇಂತಹ ಬೃಹತ್ ಯೋಜನೆ ಸುಮಾರು ೩೦ ದೊಡ್ಡ ಹಾಗೂ ೧೩೦ ಮಧ್ಯಮ ಗಾತ್ರದ
ಅಣೆಕಟ್ಟುಗಳನ್ನು ಹೊಂದಿದೆ. ಪ್ರಾರಂಭದಲ್ಲಿ ಈ
ಯೋಜನೆಯ ಉದ್ದೇಶ ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳ
ಬರಪ್ರದೇಶಗಳಿಗೆ ಕುಡಿಯುವ ನೀರು ಹಾಗು ವಿದ್ಯುತ್ ಸೌಕರ್ಯ ನೀಡುವುದಾಗಿತ್ತು. ಆದರೆ,
ಕಾಲಾಂತರದ ಬೆಳವಣಿಗೆಯಲ್ಲಾದ ವ್ಯತ್ಯಾಸವೇ ಬೇರೆ. ಅದರಲ್ಲೂ ಮುಖ್ಯವಾಗಿ ಇಂತಹ ಯೋಜನೆ ಸಾವಿರಾರು ಹೆಕ್ಟೇರ್ ಅರಣ್ಯವನ್ನು
ನಾಶಪಡಿಸಿದ್ದಲ್ಲದೆ, ಇಲ್ಲಿನ ಆದಿವಾಸಿ ಜನರನ್ನು ಕೂಡ ನಿರಾಶ್ರಿತರನ್ನಾಗಿ ಮಾಡಿತು.
ಈ ಯೋಜನೆಯನ್ನು ೯೦ ರ ದಶಕದ ಪ್ರಾರಂಭದಲ್ಲಿ ವಿರೋಧಿಸಿದವರಲ್ಲಿ ಮೇಧಾ ಪಾಟ್ಕರ್ , ಅರುಂಧತಿ ರಾಯ್ ಪ್ರಮುಖರು. ಒಂದು ಕಡೆ
ಈ ಚಳವಳಿ ಪರಿಸರ ಚಳವಳಿಯಾಗಿಯೂ ಮತ್ತು ಆದಿವಾಸಿಗಳ ಹಕ್ಕುಗಳ ರಕ್ಷಣಾ ನಡೆಯಾಗಿಯೂ ಮಾರ್ಪಟ್ಟಿತು.
ಆದ್ದರಿಂದ, ಈ ಎಲ್ಲ ಹಿನ್ನೆಲೆಗಳನ್ನು ಪುನರಾವಲೋಕನಕ್ಕೆ ಒಳಪಡಿಸುವದರ ಮೂಲಕ ನಾವು ಸಾತ್ಪುರ
ಶ್ರೇಣಿಯ ಬರದ ಬವಣೆಗಳನ್ನು ಅರಿತು ಕೊಳ್ಳಬೇಕಾಗಿದೆ.
ಭೌಗೋಳಿಕವಾಗಿ ಸಾತ್ಪುರ ಶ್ರೇಣಿ ಗುಜರಾತ್ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ
ಚಾಚಿದೆ, ಅಲ್ಲದೆ ಮುಖ್ಯವಾಗಿ ಪಶ್ಚಿಮಾಭಿಮುಖವಾಗಿ
ಹರಿಯುವ ದೇಶದ ಎರಡು ಪ್ರಮುಖ ನದಿಗಳಾದ ನರ್ಮದಾ ಮತ್ತು ತಪತಿಯನ್ನು ವಿಭಾಗಿಸಿದೆ. ಇಂತಹ ವಿಪುಲ ನೈಸರ್ಗಿಕ ಸಂಪನ್ಮೂಲಗಳ ನಡುವೆ ಇರುವ ಬರದ
ಕಥನಗಳ ಜಾಡು ಹಿಡಿಯಲು ನಮಗೆ ಸಾಧ್ಯವಾಗಿದ್ದು, ಏಕತಾ ಪರಿಷತ್, ಜಲ ಬಿರಾದರಿ ಮತ್ತು National Alliance of People's
Movements (NAPM) ಹಾಗೂ ಸ್ವರಾಜ್ ಅಭಿಯಾನ ಸಂಘಟನೆಗಳ ಸಹಯೋಗದ ಮೂಲಕ ಇತ್ತೀಚೆಗೆ
ಜೂನ್ ೨೧ ರಿಂದ ೨೯ ರವರೆಗೆ ಆಯೋಜಿಸಿದ್ದ DROUGHT DUTY ಮೂಲಕ. ಇಂತಹ ಪ್ರಯೋಗಕ್ಕೆ
ಮುಂಬೈನ ಇನ್ಸ್ಟಿಟ್ಯೂಟ್ ಆಫ್
ಫಾರೆನ್ಸಿಕ್ ಸೈನ್ಸ್ ನಿಂದ ಅದ್ವೈತ್ ಶುಕ್ಲಾ, ದೆಹಲಿಯ
ಸೇಂಟ್ ಸ್ಟೀಫನ್ ಕಾಲೇಜಿನಿಂದ ಧ್ರುವ ಸಿಂಘಾಲ. ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನಿಂದ
ಅಪರ್ಣಾ ಸಿಂಗ್ ಚೌಧರಿ, ಕ್ಯಾಲಿಕಟ್ ವಿವಿಯಿಂದ
ರೆಹಮಾನ್ ಪುನ್ನೋಡಿ ಮತ್ತು ಹೈದರಾಬಾದ್
ಕೇಂದ್ರೀಯ ವಿವಿಯಿಂದ ನಾನು ಹಾಜರಿದ್ದೆವು.
ನಮಗೆ ಮಹಾರಾಷ್ಟ್ರದ ನಂದುರಬಾರ್ ಜಿಲ್ಲೆಯ ತಲೋದಾ ತಾಲೂಕಿನಲ್ಲಿರುವ ೩ ಗ್ರಾಮಗಳ ಅಧ್ಯಯನ
ಕಾರ್ಯವನ್ನು ಒದಗಿಸಲಾಗಿತ್ತು. ನಮಗೆ ವಹಿಸಿದ್ದ
ಮೂರೂ ಗ್ರಾಮಗಳು ಜಿಲ್ಲೆಯ ಭೂಪಟದಲ್ಲಿ ಇರಲೇ ಇಲ್ಲ. ಇದು ನಮಗೆ ಆಶ್ಚರ್ಯ ತಂದಿತ್ತು. ನಮ್ಮ ಐದು
ಜನರ ತಂಡ ಮುಖ್ಯ ಉದ್ದೇಶವು ಇಲ್ಲಿನ ನೀರಿನ ಗುಣಮಟ್ಟ ಮತ್ತು ಜಲಸಂಪನ್ಮೂಲಗಳನ್ನು ಅಳೆಯುವುದು. ಇಂತಹ
ಕಾರ್ಯ ಯೋಜನೆಗೆ ಹೊರಟ ನಮ್ಮ ತಂಡಕ್ಕೆ ರೇವಾ ನಗರ, ಚಿಡಿಮಾಲ್, ಗುರಿಯಮಾಲ್ ಹಾಗೂ ಮಾಲ್ ಖುರ್ದಾ
ಗ್ರಾಮಗಳಲ್ಲಿನ ನೀರಿನ ಸಮಸ್ಯೆಯ ಜೊತೆಗೆ ಇತರ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವುದಾಗಿತ್ತು.
ನಾವು ಪೂರ್ವನಿಗದಿಯಂತೆ ಮೊದಲು ರೇವಾ ನಗರದಲ್ಲಿ ಉಳಿದುಕೊಂಡೆವು.
ಇದು ಸರ್ದಾರ್ ಸರೋವರ ಯೋಜನೆಯ ನಿರಾಶ್ರಿತರಿಗೆ ಕಟ್ಟಿರುವ ಒಂದು ಗ್ರಾಮವಾಗಿದ್ದು, ಇದು ಸುಮಾರು ೭,೦೦೦ ಜನಸಂಖ್ಯೆ ಹೊಂದಿದೆ. ಇಲ್ಲಿನ ಬಹುತೇಕರ
ಉದ್ಯೋಗ ಕೃಷಿ. ಇವರಿಗೆ ನೀರಿನ ಸಂಪನ್ಮೂಲ ದೊರೆಯುವುದು
ಕೊಳವೆಬಾವಿಗಳಿಂದ. ಇದು ನಿರಾಶ್ರಿತ “ಪಾವರಾ” ಬುಡಕಟ್ಟು ಸಮುದಾಯಕ್ಕೆ ಕಟ್ಟಿದ ಪುನರ್ವಸನ ಗ್ರಾಮವಾಗಿದ್ದರೂ ಸಹಿತ ಸರ್ದಾರ್
ಸರೋವರ ಯೋಜನೆಯಿಂದ ಹನಿ ನೀರು ದೊರೆತಿಲ್ಲ. ಇನ್ನು ವಿದ್ಯುತ್ ಸೌಲಭ್ಯವಂತು ದೂರದ ಮಾತು. ರಸ್ತೆ
ಸೌಕರ್ಯವಂತೂ ಅಷ್ಟಕಷ್ಟೇ. ಇಲ್ಲಿನ ನಿವಾಸಿ ವೀರಸಿಂಗ್ ಹೇಳುವಂತೆ ಬೋರ್ ವೆಲ್ಗಳನ್ನೂ ತೆರೆಯಲು
ಇಲ್ಲಿವರೆಗೂ ಯಾವುದೇ ರೀತಿಯ ಸಹಾಯಧನವನ್ನು ಇಲ್ಲಿನ ನಿರಾಶ್ರಿತರಿಗೆ ಸರ್ಕಾರ ನೀಡಿಲ್ಲ. ಇದು ಸಮತಟ್ಟಾದ
ಭೂಪ್ರದೇಶದಲ್ಲಿರುವ ರೇವಾನಗರದ ಕಥೆಯಾದರೆ, ಇಲ್ಲಿಂದ
ಸುಮಾರು ೧೦ ಕಿ.ಮೀ. ದೂರದಲ್ಲಿರುವ ಮಾಲ್ ಖುರ್ಧಾದಲ್ಲಿನ ಚಿತ್ರಣವೇ ಬೇರೆ!
ಸಾತ್ಪುರ ಶ್ರೇಣಿಯ ಸುಮಾರು ೪,೦೦೦ ಅಡಿ
ಎತ್ತರದಲ್ಲಿರುವ ೩೦ ಪಹಾಡಿಗಳ ಊರು ಮಾಲ್ ಖುರ್ದಾ. ಇಲ್ಲಿ ನಾವು ಬೋಕೊಭಾವ್ ಎನ್ನುವರ
ಮನೆಯಲ್ಲಿ ಉಳಿದುಕೊಂಡಿದ್ದೆವು. ಈ ಸಂದರ್ಭದಲ್ಲಿ ಅವರು ಬಿಡಿಸಿದ ವಾಸ್ತವ ಚಿತ್ರಣವು ಇಂದಿನ ಸರ್ಕಾರಗಳು ಹೇಗೆ
ಆದಿವಾಸಿಗಳ ಮೂಲಭೂತ ಹಕ್ಕುಗಳನ್ನು ಧಮನಗೊಳಿಸುತ್ತಿವೆ ಎನ್ನುವುದಕ್ಕೆ ಒಂದು ನೇರ
ಉದಾಹರಣೆಯಂತಿತ್ತು. ಅರಣ್ಯ ಕಾಯ್ದೆ-೨೦೦೬ರ ಅನ್ವಯ GPS ತಂತ್ರಜ್ಞಾನದ
ಮೂಲಕ ಪಹಾಡಿಗಳನ್ನು ಸಮೀಕ್ಷೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ಇಲ್ಲಿನ ಬಹುತೇಕ ಪಹಾಡಿಗಳು ಮರದ ಕೆಳಗೆ ಕಟ್ಟಲ್ಪಟ್ಟಿದ್ದರಿಂದ
ಸ್ಯಾಟಲೈಟ್ ಗೆ ಗೋಚರವಾಗಲಿಲ್ಲ. ಹೀಗಾಗಿಯೇ
ಇಲ್ಲಿನ ಬಹುತೇಕ ಬುಡಕಟ್ಟು ಸಮುದಾಯದವರಿಗೆ ಜಮೀನು ಹಕ್ಕನ್ನು ತಿರಸ್ಕರಿಸಲಾಯಿತು. ಇನ್ನು
ಆರೋಗ್ಯ, ಶಿಕ್ಷಣ ಹಾಗೂ ವಿದ್ಯುತ್ ಸೌಲಭ್ಯವಂತೂ
ಇಲ್ಲಿನವರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಮಾಲ್ ಖುರ್ಧಾ ಗ್ರಾಮಕ್ಕೆ ಸನಿಹದಲ್ಲಿರುವ ಚಿಡಿಮಾಲ್
ಮತ್ತು ಗುರಿಯಾಮಾಲ್ ಗ್ರಾಮಗಳದ್ದು ಇದೆ ಕಥೆ. ೬ ದಶಕ ಕಳೆದರೂ ವಿದ್ಯುತ್ ಇವರಿಗೆ ಇನ್ನು
ಕನಸಿನ ದೀಪವಾಗಿದೆ. ಇಲ್ಲಿನ ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದು. ಹೆರಿಗೆ ಸಮಯದಲ್ಲಿ ಸುಮಾರು
೧೦ ಕಿ.ಮೀ ದೂರದಷ್ಟು ಶ್ರೇಣಿಯ ಇಲಿಜಾರನ್ನು ದಾಟಿಯೇ ಹೋಗಬೇಕು. ಇಂತಹ
ಸಂದರ್ಭದಲ್ಲಿ ಕೆಲವರು ದಾರಿ ಮಧ್ಯದಲ್ಲಿಯೇ ಜೀವ
ಕಳೆದುಕೊಂಡಿದ್ದುಂಟು. ಇಲ್ಲಿನ ಬಹುತೇಕ ಮಹಿಳೆಯರು ಖಾರಿಫ್ ಸಮಯವನ್ನು ಹೊರತು ಪಡಿಸಿದ
ಅವಧಿಯಲ್ಲಿ ಪಕ್ಕದ ಗುಜರಾತಿಗೆ ಕಟ್ಟಡ ಕೆಲಸಕ್ಕಾಗಿ ಗೂಳೆ ಹೋಗುತ್ತಾರೆ. ಇವರಲ್ಲಿ ಗರ್ಭಿಣಿಯರು
ಸೇರಿದ್ದಾರೆ ಮತ್ತು ಕೆಲವರು ಹೆರಿಗೆಯಾಗುವ ವಾರದ ಮೊದಲು ಕೂಡ ಕೃಷಿ ಹಾಗು ಇನ್ನಿತರ ದಿನಗೂಲಿ
ಕೆಲಸಗಳಿಗೆ ಹೋಗಿದ್ದುಂಟು. ಇಲ್ಲಿನ
ಗ್ರಾಮಗಳ ನೀರಿನ ಮೂಲಗಳಂತೂ ಸಂಪೂರ್ಣ
ಬತ್ತಿಹೋಗಿವೆ. ಮಾಲ್ ಖುರ್ಧಾ ನಿವಾಸಿ
ಕರ್ಮಸಿಂಗ್ ಹೇಳುವಂತೆ ಇಲ್ಲಿ ಪ್ರತಿ
ತಿಂಗಳು ಕನಿಷ್ಟ ೨೦ ರಂತೆ ಪ್ರತಿ ವರ್ಷ ೨೦೦ ಕ್ಕೂ ಹೆಚ್ಚು ಜಾನುವಾರು ಮೇವು ಇಲ್ಲದೆ, ಇಲ್ಲವೆ ಕಲುಷಿತ ನೀರು ಕುಡಿದು ಸಾವನ್ನಪ್ಪಿವೆ. ಮುಖ್ಯವಾಗಿ ಇಲ್ಲಿನ
ಬಹುತೇಕ ಭಿಲ್ ಬುಡಕಟ್ಟು ಸಮುದಾಯದ ಜೀವನ ವಿಧಾನ
ಜಾನುವಾರಿನ ಮೇಲೆ ಅವಲಂಬಿತವಾಗಿದೆ. ಕಾರಣವಿಷ್ಟೇ ಒಂದೆಡೆ ಅದು ಕೃಷಿಯಾಗಿರಬಹುದು ಅಥವಾ
ಇನ್ನಿತರ ಕಸುಬಾಗಿರಬಹುದು., ಇಲ್ಲಿ ಯಂತ್ರಗಳ ಬಳಕೆ ಇರದಿರುವುದರಿಂದ ಬಹುಪಾಲು ಕಾರ್ಯ ಜಾನುವಾರುಗಳ ಮೇಲೆ ಅವಲಂಬಿತ. ಇದು ಜಾನುವಾರುಗಳ
ಕಥೆಯಾದರೆ ಇನ್ನೊಂದಡೆಗೆ ಗುರಿಯಾಮಾಲ್ ಅಂಗನವಾಡಿ ಚಿತ್ರಣವಂತೂ ಇನ್ನು ಹೇಳತೀರದು.
ಇಲ್ಲಿ ಅಧಿಕೃತವಾಗಿ ದಾಖಲಾಗಿರುವ
ವಿದ್ಯಾರ್ಥಿಗಳ ಸಂಖ್ಯೆ ೪೦. ಆದರೆ, ಭೇಟಿಯ ವೇಳೆ ನಾವು ಮನಗಂಡಿದ್ದು ದಿನಪ್ರತಿ
ಬರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೬ ..!
ಎಂಬುದು. ಇದಿಷ್ಟೇ ಮಾತ್ರವಲ್ಲ, ಇಲ್ಲಿ ದಿನಂಪ್ರತಿ ಮಧ್ಯಾಹ್ನದ ಬಿಸಿ ಊಟ ಕೊಡುವ ಪರಿಪಾಠವಂತೂ
ಇಲ್ಲವೇ ಇಲ್ಲ! ಕೆಲವು ವಿದ್ಯಾರ್ಥಿಗಳು ತಾವು ಊಟ
ಮಾಡಿ ಮಿಕ್ಕ ಅನ್ನವನ್ನು ಕೈವಸ್ತ್ರದಲ್ಲಿ ಕಟ್ಟಿ ಕೊಳ್ಳುವ ದೃಶ್ಯ ನಮಗೆ ವಿಚಿತ್ರವೆನಿಸಿತು. ಇದರ ಬಗ್ಗೆ ವಿಚಾರಿಸಿದಾಗ
ಇಲ್ಲಿನ ಬಹುತೇಕ ಬುಡಕಟ್ಟು ಸಮುದಾಯಗಳು ಪ್ರತಿ ದಿನ ೨ ಹೊತ್ತು ಮಾತ್ರ ಊಟವನ್ನು ಮಾಡುತ್ತಾರಂತೆ.
ಇನ್ನು ಯಾರಾದರೂ ಅತಿಥಿಗಳು ಮನೆಗೆ ಬಂದರಂತೂ ಆ
ದಿನ ಒಂದೇ ಹೊತ್ತು ಊಟ ಅವರಿಗೆ. ಇಂತಹ
ಅನುಭವ ನಮಗಾದದ್ದು ನಾವು ಚಿಡಿಮಾಲ್ ಗೆ
ಭೇಟಿ ನೀಡಿದಾಗ. ಈ ಗ್ರಾಮ ಸುಮಾರು ೩೭೦ ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಕೇವಲ ೪ ಜನ ಮಾತ್ರ ೧೦ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇಲ್ಲಿನ ಬಹುತೇಕ ಮಕ್ಕಳು ಆಹಾರದ ಕೊರತೆಯಿಂದಾಗಿ Low responsiveness to stimuli ಯಿಂದ ಬಳಲುತ್ತಿದ್ದಾರೆ.
ಇಂತಹ ಹಲವು ಕರುಣಾಜನಕ ಕಥೆಗಳು ಈ ಮಾಲ್ ಖುರ್ದಾ
, ಚಿಡಿಮಾಲ್ ಮತ್ತು ಗುರಿಯಾಮಾಲ್ ಗ್ರಾಮಗಳಲ್ಲಿ ಸಾಮಾನ್ಯ ಎನ್ನುವಷ್ಟರಮಟ್ಟಿಗಿವೆ. ಇನ್ನು
ನೀರಿನ ವಿಷಯಕ್ಕೆ ಬರುವುದಾದರೆ ಇಲ್ಲಿ
ಕನಿಷ್ಟ ೮ ಜನರು ೫೦ ಲೀಟರ್ ನೀರಿನಲ್ಲಿ
ತಮ್ಮ ಇಡೀ ದಿನವನ್ನು ಕಳೆಯುತ್ತಾರೆ. ನಮಗೆ ಇನ್ನೊಂದು ಆಘಾತಕಾರಿ ಅಂಶ ಕಣ್ಣಿಗೆ ಬಿದ್ದದ್ದು ಇಲ್ಲಿ ಪ್ರತಿಯೊಬ್ಬರೂ
ಮಲವಿಸರ್ಜನೆಗೆ ಕಲ್ಲೋ ಅಥವಾ ಮಣ್ಣನ್ನೂ ಬಳಸುವ
ಅಮಾನವೀಯ ಪರಿಪಾಠವಿದೆ.
ಇಲ್ಲಿಯವರೆಗೂ ನಾವು ಕೇಳದೆ ಇದ್ದ ಇಂತಹ ಸಂಗತಿಗಳು
ಸರ್ಕಾರಕ್ಕೆ ತಿಳಿದಿವೆಯೇ ..? ಎನ್ನುವುದು ಪ್ರಶ್ನೆ. ಒಂದು ಕಡೆ ವಿಶ್ವ ಆರೋಗ್ಯ ಸಂಸ್ಥೆ (WHO)
ನಿರ್ದೇಶನದಂತೆ ಪ್ರತಿ ವ್ಯಕ್ತಿಯು ಕನಿಷ್ಟ ೫೦ ರಿಂದ ೧೦೦ ಲೀಟರ್ ನೀರನ್ನು ಬಳಸಬೇಕು ಎನ್ನುವ ಈ
ನಿಯಮ ಖಂಡಿತ ಇಲ್ಲಿರುವ ಹಳ್ಳಿಗಳಿಗೆ ಅನ್ವಯವಲ್ಲ
ಎನ್ನುವಂತಿವೆ. ಇಂತಹ ಸಂಗತಿಗಳು ನಮಗೆ ದಾರಿಗುಂಟ ಈ ಹಳ್ಳಿ ಗಳಲ್ಲಿರುವ ಪಹಾಡಿಗಳ ಮಧ್ಯ ಸಾಗುತ್ತಲಿರುವಾಗ ಪ್ರತಿ ಪಹಾಡಿಯ ಒಂದೊಂದು ದೃಶ್ಯವು ನಮಗೆ ಹೊಸ ಜೀವನ ದರ್ಶನದಂತೆ
ಗೋಚರಿಸುತ್ತಿತ್ತು.
ಇದುವರೆಗೂ ಶಾಲೆಗೆ ದಾಖಲಾಗದ ಸುನೀತಾ ಎಂಬ ೧೦
ವರ್ಷದ ಬಾಲಕಿ ಕಳೆದೆರಡು ವರ್ಷಗಳಿಂದ
ಪ್ರತಿದಿನ ಬೆಳಗಿನ ೪ ಗಂಟೆಯಿಂದ ಸೂರ್ಯ ಸುಡು ನೆತ್ತಿಗೆ ಬರುವವರೆಗೆ ಸುಮಾರು ೪೦ ಲೀಟರ್ ಭಾರದ
ಎರಡು ಲೋಹದ ಕೊಡಗಳನ್ನು ಹೊತ್ತು ಸಾತ್ಪುರದ ಶ್ರೇಣಿಯ ಕಣಿವೆಗಳ ಇಳಿಜಾರುಗಳನ್ನು ದಾಟಿ ಕನಿಷ್ಟ ೩
ರಿಂದ ೪ ಕಿಲೋಮೀಟರು ದೂರದಲ್ಲಿರುವ ಸಣ್ಣ ಒರತೆಯಿಂದ ನೀರನ್ನು ಮನೆಗೆ ಒಯ್ಯುತ್ತಾಳೆ. ಇಲ್ಲಿ ರುವ
ನೀರಿನ ಸೆಲೆಯಲ್ಲಿ ಒಂದು ಮಡಿಕೆಯಷ್ಟು ನೀರು ತುಂಬಬೇಕೆಂದರೆ ಕನಿಷ್ಟ ಪಕ್ಷ ೧ ಗಂಟೆಯವರೆಗೆ
ಕಾಯಬೇಕು. ಇದು ಸುನೀತಾನ ಕಾಯಕ ಮಾತ್ರವಲ್ಲ ಇಲ್ಲಿರುವ ಎಲ್ಲ ಎಳೆಯ ಕಂದಮ್ಮಗಳು ಸಹಿತ ಮಾಡುವ
ಸಾಮಾನ್ಯ ಕಾಯಕ ಎನ್ನುವ ಇಲ್ಲಿನ ಹಿರಿಯನೊಬ್ಬ
ಹೇಳಿದ ಮಾತು ಈ ಪ್ರದೇಶದಲ್ಲಿನ ಬರದ ತೀವ್ರತೆಗೆ ಕನ್ನಡಿ
ಹಿಡಿದಂತಿದೆ.
ಒಂದು ಕಡೆ ನಮಗೆ ಮಾಲ್ ಖುರ್ದಾ, ಚಿಡಿಯಮಾಲ್ ಹಾಗೂ
ಗುರಿಯಾಮಾಲ್ ಗಳು ಗಾಂಧೀಜಿಯ Self sustained Republic model ನ ಸುಖಿ
ರಾಜ್ಯಗಳಾಗಿ ಕಂಡರೂ ಸಹಿತ Article 21 ರಂತೆ
ಸಂವಿಧಾನಾತ್ಮಕವಾಗಿ ದೊರಕಬೇಕಾದ Right to Life ಇಲ್ಲಿ ದಿನವಿಡಿ
ಉಲ್ಲಂಘಿಸಲ್ಪಡುತ್ತಿದೆ. ಅದು ಶಿಕ್ಷಣದ ರೂಪದಲ್ಲಿರಬಹುದು, ಆಹಾರದ ರೂಪದಲ್ಲಿರಬಹುದು ಅಥವಾ
ಆರೋಗ್ಯದ ರೂಪದಲ್ಲಿರಬಹುದು. ಇನ್ನು ನಾವು ಇತಿಹಾಸದ ಪುಟಗಳನ್ನು ಕೆಣಕಿದಾಗ ಬುಡಕಟ್ಟು ಸಮುದಾಯಗಳ
ಏಳಿಗೆಯ ನಿಟ್ಟಿನಲ್ಲಿ ಉಂಟಾದ ಪ್ರಮುಖ
ಚರ್ಚೆಗಳಲ್ಲಿ ಮಾನವಶಾಸ್ತ್ರಜ್ಞ ವೆರಿಯರ್
ಎಲ್ವಿನ್ ನ Isolation Approach (ಪ್ರತ್ಯೇಕತೆಯ ವಿಧಾನ) G.S ಘುರ್ಯ ರವರ Assimilation
Approach (ಹೊಂದಾಣಿಕೆಯ
ವಿಧಾನ) ಹಾಗೂ ಸ್ವಾತಂತ್ರೋತ್ತರ ಭಾರತದಲ್ಲಿ ಚಾಲನೆಯಲ್ಲಿರುವ ಜವಾಹರಲಾಲ್ ನೆಹರುರವರ Integration
Approach (ಏಕೀಕರಣ
ವಿಧಾನ)ಗಳು ನಮಗೆ ಬುಡಕಟ್ಟು ಸಮುದಾಯಗಳ
ಅಭಿವೃದ್ಧಿ ವಿಚಾರದಲ್ಲಿ ಬಹುಮುಖ ಚರ್ಚೆಗೆ
ಆಸ್ಪದ ನೀಡುತ್ತವೆ. ಇಂತಹ ಚರ್ಚೆಗಳಲ್ಲಿ ಸ್ವಾತಂತ್ರೋತ್ತರ ಬೆಳವಣಿಗೆಯಲ್ಲಿನ Integration approach ಬಗ್ಗೆ ಚರ್ಚಿಸುವುದು
ಈ ವಿಷಯದ ಮಟ್ಟಿಗೆ ಹತ್ತಿರವಾಗುತ್ತದೆ. ಅಂದರೆ ಬುಡಕಟ್ಟು ಸಮುದಾಯಗಳನ್ನು
ಸಾಮಾನ್ಯರಂತೆ ಮುಖ್ಯ ಪರದೆಗೆ ತರುವುದರ ಜೊತೆಗೆ
ಅವರ ಸ್ಥಳೀಯ ಸಂಪ್ರದಾಯ, ಭಾಷೆ, ಪದ್ದತಿ, ರೂಢಿಗಳನ್ನು ಸಂರಕ್ಷಿಸುವುದು ಇದರ ಉದ್ದೇಶ ವಾಗಿದೆ.
ಇಂತಹ ಅಭಿವೃದ್ಧಿಪರ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದ ಈ ವಿಧಾನ ಬುಡಕಟ್ಟು ಸಮುದಾಯಗಳ ಏಳಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಆದರೆ, ಇಲ್ಲಿನ ಎಲ್ಲ
ಹಳ್ಳಿಗಳ ವಿಚಾರದಲ್ಲಿ ಇದೊಂದು ಹಸಿ ಸುಳ್ಳು ಎನಿಸುತ್ತದೆ. ಕಾರಣ, ನಾವು ಇಲ್ಲಿ ಬಹುಮುಖ್ಯವಾಗಿ
ಗಮನಿಸಿದ ಸಂಗತಿಯೆಂದರೆ ಸರ್ಕಾರದ ೯೦ ರಷ್ಟು ಯೋಜನೆಗಳು
ಇವರಿಗೆ ಗೊತ್ತೇ ಇಲ್ಲ. ನಾವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ
ಬಗ್ಗೆ ವಿಚಾರಿಸಿದಾಗ ಬಹುತೇಕ ಜನರಿಗೆ ಇಂತಹ ರೋಜಗಾರ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಇನ್ನು ಇಂತಹ ಹೀನಾಯ
ಸ್ಥಿತಿಗಳ ಮಧ್ಯದಲ್ಲಿ ಬದುಕುತ್ತಿರುವ ಈ ಮಣ್ಣಿನ
ಮಕ್ಕಳಿಗೆ Digital India,
Make in India ಮತ್ತು shining India ಎನ್ನುವ
ಬಹುವರ್ಣ ರಂಜಿತ ಭಾರತದಲ್ಲಿ ಇವರಿಗೆ ಪಾಲೆಷ್ಟು
ಎನ್ನುವುದನ್ನು ನಾವು ಚಿಂತಿಸಬೇಕಾಗಿದೆ. ಒಟ್ಟಾರೆ ಹೇಳುವುದಾದರೆ ಇಲ್ಲಿ ಬರ ಎನ್ನುವುದು ಕೇವಲ ನಿಸರ್ಗದಿಂದ ಆದ ಪಿಡುಗಲ್ಲ. ಇದು ಸರ್ಕಾರದ
ಇಚ್ಛಾಶಕ್ತಿಗೆ ಮತ್ತು ಅದರ ಯೋಜನೆ ಮತ್ತ್ತು ಕಾರ್ಯಕ್ರಮಗಳಿಗೆ ಅಂಟಿದ ಪಿಡುಗಾಗಿದೆ. ಇಂತಹ
ಸಂದರ್ಭದಲ್ಲಿ ಜನವರಿ ೨೬, ೧೯೫೦ ರಂದು
ಸಾಂವಿಧಾನಿಕ ಶಾಸನ ಸಭೆಯ ಚರ್ಚೆಗಳಲ್ಲಿ(Constituent Assembly Debates)
ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ
ಮಾತುಗಳು ನಮಗೆ ಇಂದಿಗೂ ಪ್ರಸ್ತುತ ಎನಿಸುತ್ತವೆ.
“ಜನವರಿ ೨೬, ೧೯೫೦ ರ ಇಂದು ನಾವು ಜೀವನದ ಹಲವು ವೈರುಧ್ಯಗಳಲ್ಲಿ
ಕಾಲಿಡುತ್ತಿದ್ದೇವೆ. ರಾಜಕೀಯದಲ್ಲಿ ನಮಗೆ ಸಮಾನ ಅವಕಾಶವಿರುತ್ತದೆ. ಆದರೆ, ಸಾಮಾಜಿಕ ಮತ್ತು
ಆರ್ಥಿಕ ವಿಷಯಗಳಲ್ಲಿ ಇದು ಇನ್ನೂ ಅಸಮಾನತೆಯಿಂದ ಕೂಡಿದೆ. ಇಂದು ನಾವು ರಾಜಕೀಯದಲ್ಲಿ ಒಂದು ಮತ
ಒಂದು ಮೌಲ್ಯ ತತ್ವವನ್ನು ಗುರುತಿಸುತ್ತೇವೆ.
ಆದರೆ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ವ್ಯವಸ್ಥೆಯ ಕಾರಣದಿಂದ ಒಬ್ಬ ವ್ಯಕ್ಯಿ ಒಂದು ಮೌಲ್ಯ ಎನ್ನುವ ಅಂಶವನ್ನು
ನಿರಂತರವಾಗಿ ತಿರಸ್ಕರಿಸಲಾಗುತ್ತಿದೆ. ಇನ್ನೂ ಎಲ್ಲಿಯವರೆಗೆ ನಾವು ಇಂತಹ ಬದುಕಿನ ವೈರುಧ್ಯಗಳ
ನಡುವೆ ಜೀವಿಸಬೇಕು..? ಇನ್ನೂ ಎಲ್ಲಿಯತನಕ ನಾವು
ಈ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿನ ಅಸಮಾನತೆಯ ಧೋರಣೆಯನ್ನು ಮುಂದುವರೆಸುವುದು. ಒಂದು ವೇಳೆ ನಾವು ಹೀಗೆ ಇದೇ ರೀತಿಯ ತಿರಸ್ಕರಿಸುವ ಮನೋಭಾವವನ್ನು ಮುಂದುವರೆಸಿದ್ದೇ ಆದಲ್ಲಿ
ಅದು ಪ್ರಜಾಪ್ರಭುತ್ವವನ್ನು ಗಂಡಾಂತರದಲ್ಲಿಟ್ಟಂತೆ. ಆದ್ದರಿಂದ, ನಾವು ಸಾಧ್ಯವಾದಷ್ಟು ಮಟ್ಟಿಗೆ
ಈ ವೈರುಧ್ಯಗಳನ್ನು ತೊಡೆದು ಹಾಕಬೇಕಾಗಿದೆ.
ಇಲ್ಲದೆ ಹೋದರೆ ಯಾವ ಶಕ್ತಿಗಳು ಸಮಾನತೆಯ ಅವಕಾಶದಿಂದ ತಿರಸ್ಕರಿಸಲ್ಪಟ್ಟಿರುತ್ತವೆಯೋ ಅಂಥ ಧಮನಿತ
ಶಕ್ತಿಗಳು ಶ್ರಮದಿಂದ ಕಟ್ಟಿದ ಈ ಪ್ರಜಾಪ್ರಭುತ್ವ ಅಡಿಪಾಯವನ್ನೇ ಅಲುಗಾಡಿಸುತ್ತವೆ.”
ಈ ಮೇಲಿನ ಎಲ್ಲ ಬದುಕಿನ ವೈರುಧ್ಯದ
ಅಂಶಗಳನ್ನು ೬೫ ವರ್ಷಗಳ ಹಿಂದೆಯೇ ಮನಗಂಡು
ಎಚ್ಚರಿಸಿದ್ದ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಜಿಡ್ಡುಗಟ್ಟಿದ ನಮ್ಮ ಪ್ರಜ್ಞೆಯ ಮೇಲೆ ಚಾಟಿ
ಬೀಸುವಂತಿದೆ.
ಮಂಜುನಾಥ ನರಗುಂದ
ಎಂ.ಎ.ರಾಜ್ಯಶಾಸ್ತ್ರ
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ
No comments:
Post a Comment